Saturday, January 17, 2015

ಚಿಂತೆಗೆ ಕೊನೆಯುಂಟೆ?

(೧೨-ಜನವರಿ-೨೦೧೫ ರ ಪಂಜು ಪತ್ರಿಕೆಯಲ್ಲಿ ಪ್ರಕಟವಾದ ಕತೆ )
ಒಮ್ಮೆ ಮೆದುಳಿಗೆ ಹೊಕ್ಕ ಚಿಂತೆಗಳಿಗೆ ಹೊಸತು ಹಳತು ಎನ್ನುವ ಭೇದಬಾವವಿಲ್ಲ. ಕುಳಿತಲ್ಲಿ, ನಿಂತಲ್ಲಿ, ಹೋದಲ್ಲಿ, ಬಂದಲ್ಲಿ ಮನಸ್ಸನ್ನು ಹೊಕ್ಕ ಚಿಂತೆಗಳು ಆಗಾಗ ಜಾಗ್ರತಗೊಂದು ಕಾಡುತ್ತಿರುತ್ತವೆ. ಇರಲಿ ಎಂದು ಹಾಗೆ ಸುಮ್ಮನೆ ಬಿಡುವಂತಿಲ್ಲ. ಹಾಗೇನಾದರೂ ಬಿಟ್ಟು ಬಿಟ್ಟರೆ ಅದು ಬೆಳೆಯುತ್ತಾ ಹೋಗಿ ಹೆಮ್ಮರವಾಗಿ ಬಿಡುತ್ತದೆ. ಆ ಚಿಂತೆಗಳಿಗೆ ಅದೆಷ್ಟು ಬೇಗ ಪರಿಹಾರ ಕಂಡುಕೊಳ್ಳುತ್ತೇವೋ ಅಷ್ಟು ಒಳ್ಳೆಯದು. ಇದು ಸೋಮನಿಗೂ ಕೂಡ ತಿಳಿದ ವಿಷಯ. ಸೋಮ ಜಾಸ್ತಿ ಓದಿದವನಲ್ಲದಿದ್ದರೂ ತನ್ನ ಅರವತ್ತು ವರ್ಷದ ಅನುಭವದಿಂದಾಗಿ ಅವನಿಗೆ ಅದೆಲ್ಲವೂ ತಿಳಿದ ವಿಚಾರವಾರವೇ. ಹಾಗಂತ ಸೋಮನೇನು ಚಿಂತೆಯೇ ಇಲ್ಲದ ವ್ಯಕ್ತಿಯೇನಲ್ಲ. ಅವನ ಮನಸ್ಸಿನಲ್ಲೂ ಅದೆಷ್ಟೋ ಚಿಂತೆಗಳು ಬಂದು, ಕಾಡಿ ಹೊರಟು ಹೋಗಿವೆ. ಆದರೆ ಒಂದು ಚಿಂತೆ ಮಾತ್ರ ಹಲವಾರು ವರ್ಷಗಳಿಂದ ಕಾಡುತ್ತಲೇ ಇದೆ. ಅದು ಇತರರೊಂದಿಗೆ ಹೇಳಿಕೊಳ್ಳಲು ಆಗದ, ಪರಿಹರಿಸಲು ಆಗದಂತಹ ಚಿಂತೆಯಾದ್ದರಿಂದ ಆಗಾಗ ಕಾಡುತ್ತಲೇ ಇರುತ್ತದೆ.

ಸೋಮ ಗಿರಿಜಾಳನ್ನು ಮದುವೆಯಾಗಿ ಹತ್ತು ಹದಿನೈದು ವರ್ಷಕಳೆದರೂ ಮಕ್ಕಳಾಗಲಿಲ್ಲ. ಮಕ್ಕಳಾಗಲಿ ಎಂದು ಸಿಕ್ಕ ಸಿಕ್ಕವರೆಲ್ಲ ಕೊಟ್ಟ ಬಿಟ್ಟಿ ಸಲಹೆಗಳನ್ನು ಪಾಲಿಸಿದ್ದಾಯಿತು. ಕಂಡ ಕಂಡ ದೇವರಿಗೆಲ್ಲ ಕೈ ಮುಗಿದದ್ದಾಯಿತು. ಅವರು, ಇವರು ಕೊಟ್ಟ ಬೇರುಗಳನ್ನು ತೇಯ್ದು ಕುಡಿದಿದ್ದಾಯಿತು, ಹೆಂಡತಿಗೂ ಕುಡಿಸಿದ್ದಾಯ್ತು. ದೇವರಿಗೆ ಹರಕೆ ಹೊತ್ತಿದ್ದಾಯ್ತು. ಆದರೆ ಮಕ್ಕಳಾಗಲಿಲ್ಲ. ಮಕ್ಕಳಿಲ್ಲ ಎನ್ನುವ ಚಿಂತೆ ಕಾಡುತ್ತಲೇ ಇತ್ತು. ಹೀಗಿರುವಾಗ ಒಮ್ಮೆ ಗಿರೀಜಾಳಿಗೆ ಹುಷಾರು ತಪ್ಪಿದಾಗ, ಸೋಮ ಹೆಂಡತಿಯನ್ನು ನಗರದ ದೊಡ್ಡಾಸ್ಪತ್ರೆಗೆ ಕರೆದುಕೊಂಡು ಹೋದ. ಆ ಆಸ್ಪತ್ರೆಯ ದೊಡ್ಡ ಡಾಕ್ಟ್ರೇನೂ ಅವನಿಗೆ ಪರೀಚಯವಿಲ್ಲದವರೇನಲ್ಲ. ಮಕ್ಕಳಿಲ್ಲವೆಂದು ಅವರ ಬಳಿಯೂ ಹತ್ತಾರು ಬಾರಿ ಹೋಗಿ ಔಷಧ ತಂದು ತಿಂದಿದ್ದರೂ ಕೂಡ. ಆ ದೊಡ್ಡ ಡಾಕ್ಟರಿಗೆ ಗಿರಿಜಾಳ ಸ್ಥಿತಿ ನೋಡಿದಾಗಲೇ ಇದು ಚಿಂತೆಯಿಂದ ಬಂದ ಕಾಯಿಲೆಯೆಂದು, ಗಂಡ ಹೆಂಡತಿಯನ್ನು ಕರೆದು ಕೂಡಿಸಿಕೊಂಡು ಡಾಕ್ಟರರು, "ನೋಡಿ ನಿಮಗೆ ಆಗಲೇ ೩೫ -೪೦ ವರ್ಷವಾಯಿತು. ಇನ್ನೂ ಸ್ವಂತ ಮಕ್ಕಳಿಗಾಗಿ ಪ್ರಯತ್ನಿಸುವ ಬದಲು ಯವುದಾದರೂ ಅನಾಥ ಮಗುವನ್ನು ಚಿಕ್ಕದಿದ್ದಾಗಲೇ ದತ್ತು ತೆಗೆದುಕೊಂಡು ಸಾಕಬಹುದಲ್ಲ. ನಿಮಗೂ ಮಕ್ಕಳಿಲ್ಲ ಎನ್ನುವ ಕೊರತೆಯೂ ನೀಗಿದಂತಾಗುತ್ತದೆ, ಆ ಅನಾಥ ಮಗುವಿಗೂ ಬಂದು ದಾರಿ ಸಿಕ್ಕಂತಾಗುತ್ತದೆ." ಎಂದು ಹೇಳಿದಾಗ ಗಂಡ ಹೆಂಡಿರಿಬ್ಬರೂ ಯೋಚಿಸಿ, ಡಾಕ್ಟರ್ ಹೇಳಿದ್ದು ನಿಜವೆನಿಸಿ "ಅದು ಸರಿ, ಆದರೆ ಅಂತಹ ಮಗು ಎಲ್ಲಿ ಸಿಗುತ್ತದೆ?" ಎಂದು ಕೇಳಿದರು. "ಬೇರೆ ಕಡೆ ಏಕೆ, ನಮ್ಮ ಆಸ್ಪತ್ರೆಯಲ್ಲೇ ಒಮ್ಮೊಮ್ಮೆ, ಅಪರೂಪಕ್ಕೆ ತ್ರಷೆಗೋ, ತೆವೆಲಿಗೋ ಹುಟ್ಟಿ ಯಾರಿಗೂ ಬೇಕಾಗದೇ, ಹಾಗೆ ಹುಟ್ಟಿದ ಶಿಶುವನ್ನು ಸಾಕಲೂ ಆಗದೇ, ನಮ್ಮ ಅರಿವಿಗೆ ಬಾರದಂತೆ ಇಲ್ಲೇ ಬಿಟ್ಟು ಹೋಗುವವರುಂಟು. ಅತಂಹ ಶಿಶು ಇದ್ದರೆ ಹೇಳಿ ಕಳಿಸುತ್ತೇನೆ. ಬಂದು ತೆಗೆದುಕೊಂಡು ಹೋಗಿ ಎಂದು ಹೇಳಿ ಒಂದಿಷ್ಟು ಔಷಧ ಬರೆದು ಕೊಟ್ಟು ಕಳಿಸಿದ್ದರು.

ಇದಾಗಿ ಮೂರು ತಿಂಗಳು ಕಳೆದಿದ್ದವು. ಗಿರೀಜಾಳು ಸ್ವಲ್ಪ ಚೇತರಿಸಿ ಕೊಂಡಿದ್ದಳು. ಮನೆಯ ಎದುರಿಗೆ ಯಾರೋ ಬಂದು ಸೋಮನನ್ನು ಡಾಕ್ಟರರು ಗಂಡ ಹೆಂಡಿರಿಬ್ಬರು ಕೂಡಲೇ ಬಂದು ಹೋಗಲು ತಿಳಿಸಿದ್ದಾರೆ ಎಂದು ಹೇಳಿ ಹೋದರು. ಹೇಳಿದ ದಿನವೇ ಗಂಡ ಹೆಂಡಿರಿಬ್ಬರೂ ಆಸ್ಪತ್ರೆಗೆ ಹೋಗಿ ಡಾಕ್ಟರನ್ನು ಬೆಟ್ಟಿಯಾದರು. ಡಾಕ್ಟರ್ ಗಂಡ ಹೆಂಡಿರಿಬ್ಬರನ್ನು ಕರೆದುಕೊಂಡುಹೋಗಿ ಒಂದುವಾರದ ಹಿಂದೆ ಹುಟ್ಟಿದ, ತಂದೆ ತಾಯಿಗೆ ಬೇಡವಾಗಿಯೋ ಅಥವಾ ಬೇಡವಾದ ತಂದೆಗೆ ಹುಟ್ಟಿಯೋ ಅಥವಾ ಬಹಳ ಜನರಲ್ಲಿ ತಂದೆಯಾರೆಂದೋ ತಿಳಿಯದ ಮುಗ್ದ ಏಳು ದಿನಗಳ ಗಂಡು ಮಗುವನ್ನು ತೋರಿಸಿ, ನಿಮಗೆ ಬೇಕಾದಲ್ಲಿ ತೆಗೆದುಕೊಂಡು ಹೋಗಬಹುದೆಂದರು. ಮಗು ತುಂಬಾ ಕೆಂಪಗಾಗಿ ಮುದ್ದು ಮುದ್ದಾಗಿದ್ದು ತುಂಬಾ ಸುಂದರವಾಗಿತ್ತು. ಮಕ್ಕಳಿಲ್ಲದ ಅವರಿಗೆ ಬೇಡವೆನ್ನಲಾಗದೇ ಆ ಮಗುವನ್ನು ತೆಗೆದುಕೊಂಡು ಬಂದರು.
-------------+++++++-------------
ಇದೆಲ್ಲಾ ಆಗಿ ೨೫ ವರ್ಷಗಳೇ ಕಳೆದುಹೋಗಿವೆ, ಅಂದು ಆಸ್ಪತ್ರೆಯಿಂದ ತಂದ ಮಗು ಇಂದು ಬೆಳೆದು ಯುವಕನಾಗಿದ್ದಾನೆ. ಚಿಂತೆಗಳು ಪ್ರಾರಂಭವಾಗಿದ್ದೇ ಅವನು ದೊಡ್ಡವನಾದ ಮೇಲೆ. ಮಗು ತಂದು ಅದಕ್ಕೆ ದಿನೇಶ ಎನ್ನುವ ಹೆಸರನ್ನಿಟ್ಟು, ದೊಡ್ಡವನನ್ನಾಗಿ ಮಾಡಿ, ಪದವಿಯವರೆಗೂ ಕಷ್ಟ ಪಟ್ಟು ಓದಿಸಿದ್ದರೂ ಆ ದಂಪತಿಗಳು. ಆದರೆ ದಿನೇಶ ಎಂದು ಹೈಸ್ಕೂಲು ಮುಗಿದು ಕಾಲೇಜು ಸೇರಿಕೊಂಡನೋ, ಅಲ್ಲಿಂದ ಶುರುವಾಯಿತು ದಿನೇಶನ ಹುಚ್ಚಾಟ.                                  
ಕೆಟ್ಟ ಹುಡುಗರೊಂದಿಗೆ ಸೇರಿ ಬೀಡಿ ಸೇದುವುದು, ಇಸ್ಪೀಟು ಆಡುವುದು, ಜೂಜಾಡುವುದು, ಎಲ್ಲವನ್ನು ಶುರುಮಾಡಿದ. ಆಗಾಗ ಕುಡಿದು ತಡಮಾಡಿ ಮನೆಗೆ ಬರುತ್ತಿದ್ದ. ಇತ್ತೀಚೆಗೆ ಕೆಲವು ದಿನಗಳಿಂದ ಹುಡುಗಿಯರ ಚಟವು ಪ್ರಾರಂಭವಾಗಿತ್ತು. ಇದನ್ನೆಲ್ಲ ನೋಡಿದ ದಂಪತಿಗಳು ತಮಗೆ ಮಕ್ಕಳ್ಳಿಲ್ಲದೇ ಹಾಗೆ ಇದ್ದಿದ್ದರೆ ಚೆನ್ನಾಗಿತ್ತು. ಇವನನ್ನು ಕರೆದುಕೊಂಡು ಬಂದು ಸಾಕಿ ಸಲಹಿ ತಪ್ಪು ಮಾಡಿದೆವು ಅನ್ನುವ ಚಿಂತೆ ಕಾಡತೊಡಗಿತ್ತು.

ಇಂದು ಸುದಾರಿಸಿಕೊಳ್ಳಬಹುದು, ನಾಳೆ ಸುದಾರಿಸಿಕೊಳ್ಳಬಹುದು ಎಂದು ಕಾದಿದ್ದು ವ್ಯರ್ಥವಾಗಿತ್ತು. ದಿನಕಳೆದಂತೆ ದಿನೇಶನ ಕಾಟ ಜಾಸ್ತಿಯಾಗುತ್ತಲೇ ಹೋಗಿತ್ತು. ಈಗಿಗಂತೂ ಕುಡಿದು ತಂದೆ ತಾಯಿಯರಿಗೆ ಹೊಡೆಯುವ ಮಟ್ಟಕ್ಕೆ ಬೆಳೆದಿದ್ದ. ಒಂದೆರಡು ತಿಂಗಳ ಹಿಂದೆ ಅದಾವುದೋ ಹುಡುಗಿಯನ್ನು ಕರೆತಂದು ನಾನು ಇವಳನ್ನು ಮದುವೆಯಾಗುತ್ತೇನೆ ಎಂದು ಹೇಳಿ ಹೋದವನು ಮೂನ್ರಾಲ್ಕು ದಿನ ಮನೆ ಕಡೆ ಮುಖವನ್ನೇ ತೋರಿಸದವನು, ಒಂದು ವಾರ ಕಳೆದ ನಂತರ ಆಕೆಯೊಂದಿಗೆ ಬಂದು ಈಕೆಯನ್ನು ತಾನು ಮದುವೆಯಾಗಿದ್ದೇನೆ ಅಂದು ಹೇಳಿದಾಗ ದುಃಖದ ಬದಲು ಸಂತೋಷವೇ ಆಗಿತು. ಆ ಮುದಿ ದಂಪತಿಗಳಿಗೆ ಮದುವೆಯಾದ ಮೇಲಾದರೂ ಜವಾಬ್ದಾರಿ ಬಂದು ಹೆಂಡತಿಯನ್ನು ತಮ್ಮನ್ನು ನೋಡಿಕೊಳ್ಳಬಹುದೆಂದು ತಿಳಿದುಕೊಂಡವರಿಗೆ, ಅದು ಸುಳ್ಳು ಎಂದು ತಿಳಿಯಲು ತುಂಬಾ ದಿನಾ ಬೇಕಾಗಿರಲಿಲ್ಲ. ಅಂದು ಅಪ್ಪ ಅಮ್ಮನಿಗೆ ಹೊಡೆಯುತ್ತಿದ್ದವನು ಈಗ ಕುಡಿದು ಬಂದು ಹೆಂಡತಿಗೂ ಆಗಾಗ ಹೊಡೆಯುತ್ತಿದ್ದ. ಇದ್ಯಾವ ಧರಿಧ್ರ ಪಿಂಡವನ್ನು ತಂದು ಸಾಕಿದೆವೋ ಅನ್ನುವ ಚಿಂತೆ ಕಾಡಲು ಶುರುವಾಗಿ ಐದಾರು ವರ್ಷಗಳು ಗತಿಸಿದರೂ ಇಂದಿಗೆ ಅದು ಭಲವಾಗಿತ್ತು. ಒಮ್ಮೆ ಮಗ ಸೊಸೆ ಇಲ್ಲದಾಗ ಸೋಮು, ಹೆಂಡತಿಗೆ "ಈ ಧರಿದ್ರನ ಕಾಟ ಅತಿಯಾಗಿದೆ ಒಮ್ಮೆ ಅವನಿಗೆ ಅವನ ಹುಟ್ಟಿನ ಬಗ್ಗೆ ಹೇಳಿ ಬಿಡುತ್ತೇನೆ" ಎಂದಾಗ ಗಿರೀಜಾ "ಹಾಗೆ ಹೇಳೋದೂ ಬೇಡ, ನಮ್ಮ ಹೊಟ್ಟೆಯಲ್ಲಿ ಹುಟ್ಟದಿದ್ದರೂ, ನವು ಸಾಕಿ ಬೆಳೆಸಿದ್ದೇವೆ. ಇಷ್ಟು ವರ್ಷ ಹೇಗೋ ಸಹಿಸಿ ಕೊಂಡಿದ್ದಿವಿ. ನಾವು ಇನ್ನೆಷ್ಟು ವರ್ಷ ಬದುಕುತ್ತೇವೆ?" ಎಂದಳು. ಆಗ  ಸೋಮ "ಹಾಗಲ್ಲ ಗಿರೀಜಾ ನಾವೇನೋ ಸಹಿಸಿಕೊಳ್ಳಬಹುದು, ಆದರೆ ಆ ಹುಡುಗಿ, ಅವನನ್ನು ನಂಬಿ ಬಂದವಳು. ಅವಳಿಗಾದರೂ ಆತ ಒಳ್ಳೆಯವನಾದರೆ ಸಾಕಿತ್ತು. ಹೀಗೆ ಮುಂದುವರೆದರೆ ಅವಳ ಬಾಳು ಹಾಳಾಗುತ್ತದೆ".

"ಅವನಿಗೆ ಹಾಗೆ ಏನನ್ನು ಹೇಳುವುದು ಬೇಡಾ, ಹಾಗೆನಾದರೂ ಅವನಿಗೆ ತಿಳಿಸಿದರೆ, ನಾನು ಬದುಕುಳಿಯುವುದಿಲ್ಲ. ನೀವೇನಾದರೂ ಹೇಳಿದರೆ ನನ್ನ ಮೇಲಾಣೆ" ಎಂದು ಹೆಂಡತಿ ಆಣೆ ಇಟ್ಟಾಗ ಸೋಮನಿಗೆ ಇನ್ನೂ ಚಿಂತೆ ಹೆಚ್ಚಾಗಿತ್ತು. ಯಾರೊಂದಿಗೂ ಹೇಳಿಕೊಳ್ಳಲೂ ಆಗದೇ, ಮನಸ್ಸಲ್ಲೇ ಇಟ್ಟುಕೊಳ್ಳಲೂ ಆಗದ ರೀತಿಯಲ್ಲಿ ಕಾಡುತ್ತಲೇ ಇತ್ತು. ಇದೊಂದು ಚಿಂತೆ ಇಲ್ಲ ಅಂದಿದ್ದರೆ ಸೋಮನಷ್ಟು ಸುಖಿ ಜೀವಿಯಾರು ಇಲ್ಲ ಅನ್ನ ಬಹುದಿತ್ತು. ಈ ಜಗತ್ತೇ ಹಾಗೆ ಅಲ್ಲವೇ, ಇಲ್ಲಿ ಚಿಂತೆಯಿಲ್ಲದವರು ಯಾರಿದ್ದಾರೆ. ಎಲ್ಲ ಇದೆ ಅನ್ನುವವರಿಗೂ ಒಂದಲ್ಲಾ ಒಂದು ಚಿಂತೆ ಕಾಡುತ್ತಲೇ ಇರುತ್ತದೆ. ಕೆಲವರು ತೋರಿಸಿಕೊಳ್ಳುತ್ತಾರೆ, ಕೆಲವರು ತೋರಿಸಿಕೊಳ್ಳುವುದಿಲ್ಲ ಅಷ್ಟೆ.

--ಮಂಜು ಹಿಚ್ಕಡ್

No comments:

Post a Comment