Saturday, April 12, 2014

ಗಂಡ ಹೆಂಡಿರ ಜಗಳ, ಕುಡಿದಿದ್ದು ಇಳಿಯುವ ತನಕ!

ಅದೊಂದು ಚಿಕ್ಕದಾದ ಬಡ ಕುಟುಂಬ, ಗಂಡ ಹೆಂಡತಿ, ಎರಡು ಮಕ್ಕಳು. ಆರತಿಗೊಬ್ಬ ಮಗಳು, ಕಿರುತಿಗೊಬ್ಬ ಮಗ. ಊರ ಕೇರಿಯ ಪಕ್ಕದಲ್ಲಿ ಚಿಕ್ಕ ಗುಡಿಸಲಲ್ಲಿ ವಾಸ. ಗಂಡ ಹೆಂಡತಿ ಇಬ್ಬರ ಉದ್ಯೋಗ ಒಂದೇ, ಕೂಲಿ ಕೆಲಸ. ಗಂಡನದು ಕಲ್ಲು ಒಡೆಯುವ ಕೆಲಸವಾದರೆ, ಹೆಂಡತಿಯದು ಒಡೆದ ಕಲ್ಲುಗಲನ್ನು ಜೋಡಿಸಿ ಇಡುವುದು. ಇಬ್ಬರ ಕೆಲಸವು ಒಂದೇ ಕಲ್ಲು ಕೋರೆಯಲ್ಲಿ ಆದ್ದರಿಂದ ಒಟ್ಟಿಗೆ ಹೋಗಿ ಬರುವುದು ಒಂದು ವಾಡಿಕೆ. ತುಂಭಾ ಅನೋನ್ಯವಾದ ಧಾಂಪತ್ಯ ಜೀವನ. ಅವರು ಜೊತೆಯಲ್ಲಿ ಕೆಲಸ ಮಾಡುವಗಾಗಲಿ, ಅಥವಾ ರಸ್ತೆಯಲ್ಲಿ ಒಟ್ಟಿಗೆ ಕೆಲಸಕ್ಕೆ ಹೋಗುವಗಾಗಲಿ ಯಾರೇ ಈ ಜೋಡಿಯನ್ನ ನೋಡಿದರೂ ಅಂದು ಕೊಳ್ಳುವುದಿಷ್ಟೆ ಗಂಡ ಹೆಂಡತಿ ಅಂದರೆ ಹೀಗಿರಬೇಕು ಅಂಥಾ. ಇವರು ಕೈ ಕೈ ಹಿಡಿದು ಓಡಾಡುವುದನ್ನಾಗಲೀ, ಅಥವಾ ಕೆಲಸ ಮಾಡುವಾಗ ಅವರಾಡುವ ಸರಸ ಸಲ್ಲಾಪಗಳನ್ನಾಗಲೀ ಆಲಿಸಿದವರಾರು ಅವರಿಗೆ ಮದುವೆಯಾಗಿ ಎರಡು ಮಕ್ಕಳಿದ್ದಾರೆ ಎಂದು ಹೇಳಲಾರರು. ನೋಡಿದಾಗ ಅನ್ನಿಸುವುದಿಷ್ಟೇ, ಒಂದೋ ಮದುವೆಗಾಗಿ ಪ್ರಯತ್ನಿಸುತ್ತಿರುವ ನವ ಪ್ರೇಮಿಗಳಿರಬೇಕು, ಇಲ್ಲಾ ಮದುವೆಯಾಗಿ ಒಂದೆರಡು ವಾರ ಕಳೆದಿರಬೆಕೆಂದು. ನನಗೂ ಒಂದೆರಡು ಬಾರಿ ಈ ಜೋಡಿಯನ್ನ ನೋಡಿದಾಗ ಹಾಗೆನಿಸಿದ್ದು ಸತ್ಯ.
ಇಷ್ಟೊಂದು ಅನೋನ್ಯತೆ ಇದ್ದರೂ ಅವರ ಕುಟುಂಬದಲ್ಲಿ ಒಂದು ಸಮಸ್ಯೆ ಅಥವಾ ಕೊರತೆ ಇದೆ ಅನ್ನುವ ಸತ್ಯ ಅರಿವಾಗಿದ್ದು ಮೊನ್ನೆ ಮೊನ್ನೆಯೇ. ಗಂಡನಿಗೆ ದಿನಾ ರಾತ್ರಿ ಕುಡಿಯುವ ಚಟ. ಆ ಒಂದು ಕೆಟ್ಟ ಹವಸವೇ ಈ ಒಂದು ಸಮಸ್ಯೆಯ ಮೂಲ ಕಾರಣ. ಬಹುಷಃ ಅದೊಂದು ಇಲ್ಲಾ ಅಂತಿದ್ದರೆ, ಆ ಸಂಸಾರ ಜಗತ್ತಿನ ಅತ್ಯಂತ ಸುಖಿ ಸಂಸಾರಗಳಲ್ಲಿ ಒಂದು ಅನ್ನಬಹುದಿತ್ತೆನೋ. ದಿನಾ ರಾತ್ರಿ ಕುಡಿದು ಬರುವ ಗಂಡ, ಸುಮ್ಮನೆ ತಿಂದು ಬಿದ್ದಿರುವುದಿಲ್ಲ. ಸದಾ ಒಟಗುಡುವ ಬಾಯಿ, ಮನಸ್ಸಿಗೆ ತೋಚಿದ್ದನ್ನೆಲ್ಲ ಒದರುವುದು. ಅವನು ಒದರುತ್ತಿದ್ದಾನೋ, ಅವನೊಳಗೆ ಹೊಕ್ಕ ಎಣ್ಣೆ ಒದರಿಸುತ್ತದೋ. ಒಟ್ಟಿನಲ್ಲಿ ಸುಮ್ಮನಿರಲಾರದು. ಇದೇ ವಿಷಯವಾಗಿ, ದಿನಾ ರಾತ್ರಿ ಗಂಡ ಹೆಂಡಿರ ನಡುವೆ ಜಗಳ , ಕಿತ್ತಾಟ, ಹೊಡೆದಾಟ. ಏನನ್ನು ಅರಿಯದ ಅಸಾಹಯಕ ಮಕ್ಕಳು. ಅವರ ಪಾಡನ್ನು ಕೇಳುವವರಿಲ್ಲ. ಅದೇನೋ ಅಂತಾರಲ್ಲ ಗಂಡ ಹೆಂಡಿರ ಜಗಳಕ್ಕೆ ಕೂಸು ಬಡವಾಯಿತು ಅಂತಾರಲ್ಲ ಆ ರೀತಿಯ ಸ್ಥಿತಿ ಮಕ್ಕಳದು.
ಇಷ್ಟೆಲ್ಲಾ ನಡೆದರೂ, ಮಾರನೆ ದಿನ ಮತ್ತದೆ ಅನೋನ್ಯತೆ, ನಿನ್ನೆ ರಾತ್ರಿ ಏನು ನಡೆದಿಲ್ಲ ಎನ್ನುವ ಭಾವನೆ. ಕುಡಿದ ಗಂಡನ ಮತ್ತು ಇಳಿದೊಡನೆ ಮತ್ತೆ ಹೆಂಡತಿಯ ಮೇಲಿನ ಪ್ರೀತಿ ಉಕ್ಕೇರುತ್ತದೆ. ಹೆಂಡತಿಯು ಅಷ್ಟೇ, ಮತ್ತಿನಲ್ಲಿ ಗಂಡ ಮಾಡಿದ್ದನ್ನೆಲ್ಲ ಕ್ಷಮಿಸಿ, ಮತ್ತೆ ತನ್ನ ಪ್ರೀತಿಯ ಧಾರೆಯನ್ನ ಸುರಿಸುತ್ತಾಳೆ. ಮತ್ತೆ ಒಂದಾಗಿ ಕೈ ಕೈ ಹಿಡಿದು ಕೆಲಸಕ್ಕೆ ಹೋಗುತ್ತಾರೆ. ಮತ್ತದೇ ಸರಸ, ಸಲ್ಲಾಪ. 'ಗಂಡ ಹೆಂಡಿರ ಜಗಳ ಉಂಡು ಮಲಗುವ ತನಕ' ಅನ್ನುವ ಗಾದೆ ಇದೆ. ಆದರೆ ಇವರ ಜೀವನದಲ್ಲಿ ಹಾಗಲ್ಲ, 'ಗಂಡ ಹೆಂಡಿರ ಜಗಳ ಕುಡಿದದ್ದು ಇಳಿಯುವ ತನಕ' ಎಂದರೆ ತಪ್ಪಾಗಲಾರದು.
ನಮಗೆ ಅನಿಸಬಹುದು ಸಂಸಾರ ಎಷ್ಟು ಚೆನ್ನಾಗಿದೆ, ಗಂಡ ಹೆಂಡಿರ ನಡುವೆ ಅದೆಂತಹ ತಿಳುವಳಿಕೆ ಇದೆ, ಇಂತಹ ಹೆಂಡತಿಯನ್ನು ಪಡೆದ ಆತನೇ ಅದ್ರಷ್ಟವಂತ ಎಂದು. ಆದರೆ ನನಗನ್ನಿಸಿದ್ದು ಇಷ್ಟೇ, ಗಂಡ ಹೆಂಡತಿ ಎಲ್ಲೋ ಒಂದು ಕಡೆ ತಪ್ಪು ಮಾಡುತಿದ್ದಾರೆ ಎಂದು. ಅಷ್ಟು ಅನೋನ್ಯವಾಗಿರುವ ಹೆಂಡತಿ ಮನೆಗೆ ಬರುವಾಗ ಗಂಡನನ್ನ ಪುಸಲಾಯಿಸಿ , ಮತ್ತೆ ಹೆಂಡದಂಗಡಿಗೆ ಹೋಗದಂತೆ ತಡೆಯಲು ಪ್ರಯತ್ನಿಸಬೇಕು. ಗಂಡನಿಗೆ ಕುಡಿದುದ್ದು ಇಳಿದ ಮೇಲೆ ಬುಧ್ದಿ ಹೇಳಬೇಕು. ಕುಡಿದ ಅಮಲಿನಲ್ಲಿ ಆತ ಮಾಡಿದ ತಪ್ಪುಗಳನ್ನು ಸಾವಧಾನವಾಗಿ ತಿಳಿಸಿ ಹೇಳಬೇಕು. ಗಂಡನು ಅಷ್ಟೇ, ತಾನು ಮಾಡಿದ ತಪ್ಪುಗಳನ್ನು ಸರಿಯಾಗಿ ಅರ್ಥೈಸಿಕೊಳ್ಳಬೇಕು. ತಾನು ಹೀಗೆ ಕುಡಿತವನ್ನು ಮುಂದುವರಿಸಿದ್ದಲ್ಲಿ, ತನ್ನ ಸಂಸಾರ ಹಾಳಾಗುತ್ತದೆ, ತನ್ನ ಆರೋಗ್ಯ ಕೆಡುತ್ತದೆ, ಹೆಂಡತಿ ಮಕ್ಕಳು ಬೀದಿಗೆ ಬರುತ್ತಾರೆ ಅನ್ನುವ ನೈಜತೆಯನ್ನ ಅರ್ಥ ಮಾಡಿಕೊಳ್ಳಬೇಕು.
ಇದು ಕೇವಲ ಈ ಒಂದು ಸಂಸಾರಕ್ಕೆ ಅನ್ವಯವಾಗುವುದಿಲ್ಲ. ಜಗತ್ತಿನಲ್ಲಿ ಇಂತಹ ಅದೆಷ್ಟು ಸಂಸಾರಗಳಿವೆಯೋ. ಬಹುತೇಕ ಇಂತಹ ಎಲ್ಲಾ ಸಂಸಾರಗಳಲ್ಲಿರುವ ಮೂಲ ಸಮಸ್ಯೆ ಎಂದರೆ ಕುಡಿತ. ಬಹುಷಃ ಅದೊಂದು ಇಲ್ಲಾ ಅಂತಾಗಿದ್ದರೆ ಇವರ ಸಂಸಾರ ಸಧಾ ಸುಖಿ ಸಂಸಾರವಾಗುವುದರಲ್ಲಿ ಎರಡು ಮಾತಿಲ್ಲ.
--ಮಂಜು ಹಿಚ್ಕಡ್ 

No comments:

Post a Comment