ಹಾಡು, ಸಂಗೀತ, ನೃತ್ಯ, ಅಭಿನಯ, ಪಾತ್ರಕ್ಕೆ ಹಾಗೂ ಸನ್ನಿವೇಶಕ್ಕೆ ತಕ್ಕಂತ ವೇಷ ಭೂಷಣ, ನವರಸಭರಿತಾವಾದ ಸಂಭಾಷಣೆ ಇವೆಲ್ಲವುಗಳಿಂದ ಮಿಳಿತವಾಗಿರಬಹುದಾದ ಏಕೈಕ ಜನಪದ ಕಲೆ ಎಂದರೆ ಅದು ಯಕ್ಷಗಾನ ಅಂದರೆ ತಪ್ಪಾಗಲಿಕ್ಕಿಲ್ಲ. ಹಾಗಾಗಿಯೇ ಏನೋ, ಇದು ಒಮ್ಮೆ ನೋಡಿದವರನ್ನ ತನ್ನತ್ತ ಸೆಳೆದು, ಅವರನ್ನ ಮಂತ್ರಮುಗ್ದಗೊಳಿಸಿ ಮತ್ತೊಮ್ಮೆ ಮಗದೊಮ್ಮೆ ನೋಡಿ ಆನಂದಿಸುವಂತೆ ಮಾಡಿಬಿಡುತ್ತದೆ ಏನೋ. ಚಿತ್ರರಂಗದ ಮೇರು ಕಲಾವಿದೆಯಾದ ಉಮಾಶ್ರೀಯವರನ್ನು ಕೂಡ ಯಕ್ಷರಂಗದಲ್ಲಿ ಮೊನ್ನೆ ಮೊನ್ನೆ ಅಷ್ಟೇ ಅಭಿನಯಿಸುವಂತೆ ಮಾಡಿದ್ದು ಇದಕ್ಕೆ ಒಂದು ಉದಾಹರಣೆ ಅಷ್ಟೇ. ಇಂತಹ ಅದೆಷ್ಟೋ ಹವ್ಯಾಸಿಕಲಾವಿದರು ತಮ್ಮ ವ್ರತ್ತಿಗಳ ಜೋತೆಯಲ್ಲಿ ಯಕ್ಷಗಾನವನ್ನು ಪ್ರವತ್ತಿಯಾನ್ನಿಯಾಗಿ ತೆಗೆದುಕೊಂಡವರಿದ್ದಾರೆ. ಹಾಗಾಗಿಯೇ ಒಂದಾನೊಂದು ಕಾಲದಲ್ಲಿ ಕೇವಲ ದಕ್ಷಿಣೋತ್ತರ ಕನ್ನಡ ಜಿಲ್ಲೆಗಳಿಗೆ ಸಿಮಿತವಾಗಿದ್ದ ಯಕ್ಷಗಾನ ಇಂದು ವಿಶ್ವಗಾನವಾಗಿ ವಿಶ್ವವ್ಯಾಪಿಯಾಗಿ ಬೆಳೆಯುತ್ತಿರುವುದು. ಅದಕ್ಕೆ ಊರು ಬಿಟ್ಟು ಪರ ಊರುಗಳಲ್ಲಿ ನೆಲೆನಿಂತಿರುವ ಜನ ಹಾಗು ಇಂದಿನ ಸಾಮಾಜಿಕಜಾಲತಾಣಗಳು ಕಾರಣವಿರಬಹುದೇನೋ.
                                                       ಚಿತ್ರ ಕ್ರಪೆ: ವಿಕಿಪಿಡಿಯ 
ನಮ್ಮ ಊರುಗಳಲ್ಲಿ ಅದೆಷ್ಟೋಕಡೆಗಳಲ್ಲಿ ಹರಕೆಯ ಆಟಗಳು, ಯಕ್ಷ ಸಪ್ತಾಹಗಳು ಇಂದಿಗೂ ನಡೆದುಕೊಂಡು ಬರುತ್ತಿರುವುದು ಸಾದನೆಯೇ ಸರಿ. ಬದಲಾದ ಪರಿಸರ ಮತ್ತು ಸನ್ನಿವೇಶಗಳಲ್ಲಿ ಯಕ್ಷಗಾನ ಇನ್ನೂ ಜೀವಂತವಾಗಿ ಉಳಿದು ಆಳುತ್ತಾ ಬೆಳೆಯುತ್ತಿರುವುದಕ್ಕೆ ಇದೂ ಒಂದು ಕಾರಣವಿರಬಹುದು. ನಮ್ಮಲ್ಲಿಯ ಕೆಲವು ಊರುಗಳಲ್ಲಿ ಹರಕೆಯ ಆಟದ ಜೊತೆ ಪ್ರತೀವರ್ಷ ನಿರ್ದಿಷ್ಟಗೊಳಿಸಲಾದ ದಿನದಂದು ಯಕ್ಷಗಾನಗಳನ್ನು ನಡೆಸುವು ಪರಿಪಾಟವಿದ್ದು, ಅದು ಇಂದಿಗೂ ಮುಂದುವರೆದಿದೆ. ಅಂತಹುದೇ ಒಂದು ಸಂಪ್ರದಾಯ ನಮ್ಮ ಊರಿನಲ್ಲಿಯೂ ಇಂದಿಗೂ ಮುಂದುವರೆದಿದ್ದೂ, ಅದು ಪ್ರತೀವರ್ಷ ಜನವರಿ ೨೬ ರಂದು ನಡೆಯುತ್ತದೆ.
ಹಾಗಾಗಿಯೇ ನನಗೆ ಜನವರಿ ೨೬ ಹತ್ತಿರ ಬರುತ್ತಿದ್ದಂತೆ ಮೊದಲು ನೆನಪಾಗುವುದು ನಮ್ಮೂರಲ್ಲಿ ಪ್ರತೀವರ್ಷ ನಡೆಯುವ ಯಕ್ಷಗಾನ. ನಾವು ಚಿಕ್ಕವರಿದ್ದಾಗ ಜನವರಿ ಪ್ರಾರಂಭವಾದರೆ ಸಾಕು, ನಮ್ಮೆಲ್ಲರ ಕುತುಹಲ  ಅದೊಂದೆ, ಅದೇನಂದರೆ, ನಮ್ಮೂರಲ್ಲಿ ಈ ವರ್ಷದ ಪ್ರಸಂಗ ಯಾವುದು, ಅದರಲ್ಲಿರುವ ಕಲಾವಿದರುಗಳು ಯಾರು - ಯಾರು, ಹಿಮ್ಮೆಳದಲ್ಲಿ ಯಾರಿದ್ದಾರೆ, ಮುಮ್ಮೇಳದಲ್ಲಿ ಯಾರಿದ್ದಾರೆ, ವಿಧೂಷಕರೂ ಯಾರು, ಶ್ತ್ರೀ ಪಾತ್ರದಲ್ಲಿ ಯಾರಿದ್ದಾರೆ, ಎಂದೆಲ್ಲ ತಿಳಿದುಕೊಳ್ಳುವ ಕುತೂಹಲ. ಪ್ರಸಂಗ ನಿಶ್ಚಯವಾದೊಡನೆ, ಅದರ ಕರ ಪತ್ರಕ್ಕಾಗಿ ಹುಡುಕಾಟ. ಸಿಕ್ಕೊಡನೆ, ಅದರ ಒಂದೊಂದು ಶಬ್ಧವನ್ನು ಬಿಡದೇ ಓದುವುದು. 
ಜನವರಿ ೨೬ರಂದು ಶಾಲೆಗೆ ಹೋಗಿ ಗಣರಾಜೋತ್ಸವದ ಧ್ವಜ ಹಾರಾಟ ಮುಗಿಸಿದ ತಕ್ಷಣ ಮನೆಗೆ ಬಂದು, ಊಟದ ಶಾಸ್ತ್ರ ಮಾಡಿ, ಬಯಲಾಟ ನಡೆಯುವ ಸ್ಥಳಕ್ಕೆ ಆಗಮಿಸುವುದು. ಅಲ್ಲಿ ಚಪ್ಪರ ಹಾಕುವುದರಿಂದ ಹಿಡಿದು, ಭಜನೆ ಪ್ರಾರಂಭವಾಗುವವರೆಗೂ ಅಲ್ಲಿದ್ದು ಮತ್ತೆ ಮನೆಗೆ ಬಂದು ಮತ್ತೆ ರಾತ್ರಿ ಊಟದ ಶಾಸ್ತ್ರ ಮಾಡಿ, ಹಣ್ಣು ಹಂಪಲುಗಳ ಸವಾಲು ಪ್ರಾರಂಭವಾಗುತ್ತಿದಂತೆ ಮತ್ತೆ ಬಯಲಾಟದ ಸ್ಥಳಕ್ಕೆ ಹಾಜಾರ್. ಆಟ ಪ್ರಾರಂಭವಾಗುವುದರೊಳಗೆ ಎಲ್ಲಿ ಯಾವ ಅಂಗಡಿ ಇದೆ, ಏನೇನು ಇಟ್ಟು ಕೊಂಡಿದ್ದಾರೆ, ಎಲ್ಲ ವಿಕ್ಷಿಸಿ ಬರುವುದಷ್ಟೇ ನಮ್ಮ ಕೆಲಸ, ತೆಗೆದುಕೊಳಲ್ಲಂತು ಆಗುತ್ತಿರಲಿಲ್ಲ. ಯಾಕೆಂದರೆ ಆಗ ನಾವೆಲ್ಲ ಯಕ್ಷಗಾನ ನೋಡಲು ಬರುತ್ತಿದ್ದುದು ಬರೀ ಕೈಯಲ್ಲಿ. ಎಲ್ಲೋ ಅಪರೂಪಕ್ಕೆ ೨೫ ಪೈಸೆನೋ, ೫೦ ಪೈಸೆನೋ ಸಿಕ್ಕರೆ ನಮ್ಮ  ಖುಷಿಗೆ ಮಿತಿಯೇ  ಇರುತ್ತಿರಲಿಲ್ಲ. ಸಿಕ್ಕ ಹಣದಲ್ಲಿ ಹುರಿದ ಕಡಲೆಯನ್ನೋ, ಚೊಕಲೇಟನ್ನೋ ತೆಗೆದುಕೊಳ್ಳುತ್ತಾ, ಅಲ್ಲಿ ಇಲ್ಲಿ ಸುತ್ತಾಡುತ್ತಾ, ಆಮೇಲೆ ಯಕ್ಷಗಾನ ಪ್ರಾರಂಭವಾದ ಒಂದೆರಡು ಗಂಟೆಗಳಲ್ಲಿ ಯಾವುದೋ ಒಂದು ಮೂಲೆಯಲ್ಲಿ ಹೋಗಿ ಮಲಗಿಬಿಡುತ್ತಿದ್ದೆವು. ಆಗಾಗ ಏಳುತ್ತಾ ಮತ್ತೆ ಮಲಗುತ್ತಾ, ಕಡೆಯಲ್ಲಿ ಮಂಗಳ ಹಾಡು ಕಿವಿಗೆ ಬಿಳುತ್ತಿದ್ದಂತೆ ಎದ್ದು ಕಣ್ಣೊರಿಸುತ್ತಾ ಮನೆಗೆ ಬಂದು ಬಿಡುತ್ತಿದ್ದೆವು. ಆಗ ಮನೆಯಲ್ಲಿ ಅಪ್ಪ- ಅಮ್ಮನ್ನ ಬಿಟ್ಟರೆ ನಮ್ಮನ್ನ ಕೇಳುವವರಾರಿರಲಿಲ್ಲ, ನಾವು ಮಾಡಿದ್ದೇ ರಾಜ್ಯ. ಆಗಿನ್ನು ಮೀಸೆ ಮೂಡದ, ಶಾಲೆಗೆ ಹೋಗುವ ಚಿಕ್ಕ ಚಿಕ್ಕ ಮಕ್ಕಳು. ನನಗಿನ್ನು ನೆನಪಿದೆ ಮೊದಲ ಯಕ್ಷಗಾನ ನಡೆಯುತ್ತಿದ್ದದು, ನಮ್ಮೂರ ಕೆಳಗಿರುವ ಗದ್ದೆ ಬಯಲಲ್ಲಿ. ನಂತರ ಅದು ಬಸ್ ನಿಲ್ದಾಣದ ಪಕ್ಕದಲ್ಲಿ ನಡೆಯುತ್ತಿತ್ತು. ಮುಂದೆ ರಂಗಮಂದಿರ ಕಟ್ಟಿದ ಮೇಲೆ ರಂಗಮಂದಿರಕ್ಕೆ ಬದಲಾಯಿತು. ಈ ಎಲ್ಲ ಕಡೆಗಳಲ್ಲಿಯೂ ಕುಳಿತು ನೋಡಿ ಆನಂದಿಸಿದ ನಾವೇ ಧನ್ಯರು. 
ಜನವರಿ ೨೬ ಮತ್ತೆ ಬರುತ್ತಿದೆ, ಮತ್ತೆ ಯಕ್ಷಗಾನ ಬರುತ್ತಿದೆ, ಮತ್ತೆ ಊರು ನೆನಪಾಗುತ್ತಿದೆ. ಅಂದು ಕಾಸಿರಲಿಲ್ಲ, ಉತ್ಸಾಹವಿತ್ತು, ಹುಮ್ಮಸ್ಸಿತ್ತು, ನಾವು ಮಾಡಿದರೆ, ಇಲ್ಲ ಓದಿದರೆ ಅಷ್ಟೇ ಕೆಲಸ, ಇಲ್ಲ ಸಂಪೂಣ೯ ಬಿಡುವಿತ್ತು , ದೇಹ ಮತ್ತು ಮನಸ್ಸು ಊರಲ್ಲೇ ಇತ್ತು. ಆದರೆ ಇಂದು ಕಾಸಿದೆ, ಉತ್ಸಾಹವಿದೆ, ಮನಸ್ಸಿದೆ, ಆದರೆ ದೇಹ ಬೇರೆ ಯಾವುದೋ ಊರಲ್ಲಿ ಬಿಡುವಿಲ್ಲದ ಕೆಲಸದೊಳಗೆ ಹುದುಗಿ ಹೋಗಿದೆ. ಮನಸ್ಸು - ಹುಮ್ಮಸ್ಸು ಇದ್ದರೂ ಹೋಗುವಂತಿಲ್ಲ.
ಈ ವರ್ಷ ಮೂರುದಿನದ ಯಕ್ಷಗಾನವಂತೆ. ಯಕ್ಷಗಾನವನ್ನು ನಡೆಸಿಕೊಂಡು ಹೋಗುವುದು ಅಷ್ಟು ಸುಲಭವಲ್ಲ. ಆದಕ್ಕೆ ಬೇಕಾಗುವ ಅತಿಥಿ ಕಲಾವಿದರನ್ನು ಆರಿಸಿ ತರುವುದು, ಅದಕ್ಕೆ ತಗಲುವ ವೆಚ್ಚ ಕೂಡ ಕಡಿಮೆ ಏನಲ್ಲ. ಅಂತದ್ದರಲ್ಲಿಯೂ ಇಂದಿಗೂ ಆ ಯಕ್ಷಗಾನವನ್ನ ಇಂದಿಗೂ ಊರ ಸಂಪ್ರದಾಯದಂತೆ ನಡೆಸಿಕೊಂಡು ಬರುತ್ತಿರುವುದು ಒಂದು ಸಾಧನೆಯೇ ಸರಿ. ಅಂತಹ ಸಾದನೆಯ ಗರಿಯನ್ನು ಹೊತ್ತು ಮುನ್ನೆಡಿಸಿಕೊಂಡು ಹೋಗುತಿರುವ ನನ್ನೆಲ್ಲ ಊರ ನಾಗರಿಕರಿಗೆ ನನ್ನದೊಂದು ಸಲಾಮ್!
--ಮಂಜು ಹಿಚ್ಕಡ್
