ಚಿತ್ರ: ದಿವ್ಯಶ್ರೀ
ಬೆಳಿಗ್ಗೆ ಹತ್ತಕ್ಕೆ ಹೋದ ಕರೆಂಟು, ಮಧ್ಯಾಹ್ನ ಎರೆಡು ದಾಟಿದ್ರೂ ಪತ್ತೆನೇ ಇಲ್ಲ. ಮನೆ ಮತ್ತು ಮೈ ಎರಡು ಬೇಸಿಗೆಯ ಬಿಸಿಲಿಗೆ ಕಾದು ಸುಡುತ್ತಿತ್ತು. ಮೈಯ ರಂದ್ರ ರಂದ್ರಗಳಿಂದೆಲ್ಲ ಪ್ರವಾಹೋಪಾದಿಯಲ್ಲಿ ನೀರು ಜಿನುಗುಡುತ್ತಿತ್ತು. "ಹಾಳಾದ ಕರೆಂಟು ಅದೆಷ್ಟು ಹೋತ್ತಾಯ್ತೋ ಹೋಗಿ, ಇನ್ನೂ ಬಂದಿಲ್ಲ, ಅದೇನೋ ಪವರ್ ಕಟ್ ಅಂತೆ, ಅದೆಂತಾ ಸುಡುಗಾಡೋ ಇವರದ್ದು. ದಿನಕ್ಕೆ ಅಬ್ಬಬ್ಬಾ ಅಂದರೆ ಎಂಟು ಗಂಟೆ ಇದ್ದರೆ ಹೆಚ್ಚು" ಎಂದು ಗೊಣಗುತ್ತಾ ತಾನು ಕುಳಿತ ಸ್ಥಳದಿಂದ ಸ್ವಲ್ಪ ಜರುಗಿ, ಅಲ್ಲೇ ಹತ್ತಿರದಲ್ಲಿಯೇ ಇದ್ದ ಬಿಂದಿಗೆ ಎತ್ತಿ ನೋಡಿದರು ಶಾಂತಮ್ಮನವರು. ಬಿಂದಿಗೆಯ ನೀರು ತಳ ಸೇರಿತ್ತು, ಎತ್ತಿ ನಾಲ್ಕು ಗುಟುಕು ಕುಡಿಯುವುದರಲ್ಲಿ ಬಿಂದಿಗೆ ಖಾಲಿಯಾಗಿತ್ತು.
ಎದ್ದು ಕುಂಟುತ್ತಾ ಅಲ್ಲೇ ಮೂಲೆಯಲ್ಲಿ ಇದ್ದ ಕೊಳಾಯಿ ತಿರುಗಿಸಿದರೆ, ಅಲ್ಲು ಕೂಡ ನೀರು ಖಾಲಿಯಾಗಿತ್ತು "ಈ ಹಾಳಾದ ಕರೆಂಟು ಮೊದಲೇ ಹೋಗುತ್ತೆ ಅಂತಾ ಗೊತ್ತಿದ್ದರೆ, ಮೋಟಾರು ಹಚ್ಚಿ ಸಂಪನ್ನಾದರೂ ತುಂಬಿಸಿಡುತ್ತಿದ್ದೆ, ಈಗ ಸಂಪಲ್ಲೂ ನೀರಿಲ್ಲ" ಎಂದು ತಮ್ಮಷ್ಟಕ್ಕೆ ಗೊಣಗುತ್ತಾ, ಚಿಕ್ಕ ಬಿಂದಿಗೆಯನ್ನು ಎತ್ತಿಕೊಂಡು ಮನೆಯ ಮುಂದಿನ ಬಾವಿಯ ಬಳಿ ಬಂದರು ಶಾಂತಮ್ಮನವರು.
ಸುಣ್ಣ ಬಣ್ಣ ಬಳಿದು ನೋಡಲು ಹೊಸತಾಗಿ ಕಂಡರೂ, ಅದು ಅದೆಷ್ಟೋ ತಲಮಾರುಗಳಿಂದ ಅಲ್ಲಿಯೇ ಸ್ಥಿತವಾಗಿರುವ ಹಳೆಯ ಬಾವಿ. ಶಾಂತಮ್ಮನವರ ಗಂಡನ ಮುತ್ತಜ್ಜನೋ , ಅಥವಾ ಅವನ ಮುತ್ತಜ್ಜನೋ ತೆಗಿಸಿದ ಬಾವಿಯಂತೆ ಅದು. ಆ ಬಾವಿಯ ಸುತ್ತೆಲ್ಲ ಆ ಮನೆತನಕ್ಕೆ ಸೇರಿದ ಮನೆಗಳೇ. ಮುಂದೆ ಮನಸ್ಸುಗಳು ಒಡೆದು , ಮನೆ ಒಡೆದು, ಇದ್ದ ಆಸ್ತಿಗಳನ್ನೆಲ್ಲ ಒಡೆದು ಹಂಚಿಕೊಂಡರೂ ಈ ಬಾವಿಯನ್ನೊಂದು ಒಡೆದು ಹಂಚಿಕೊಳ್ಳಲಾಗದೇ ಹಾಗೇ ಅಲ್ಲಿಯೇ ಇದ್ದು ಬಿಟ್ಟಿತ್ತು. ಆ ಮನೆತನದವರಿಗೆಲ್ಲ ಅದು ಮನೆಯ ಬಾವಿಯಾಗಿ. ಶಾಂತಮ್ಮನವರ ಮನೆಯ ಮುಂದೆ ಇದ್ದುದರಿಂದ ಶಾಂತಮ್ಮನವರಿಗೆ ಮಾತ್ರ ಅದು ಮನೆಯ ಮುಂದಿನ ಬಾವಿ.
ಆ ಬಾವಿ ಕೇವಲ ಮನೆಯ ಬಾವಿಯಾಗಿರದೇ, ಆ ಮನೆಯ ಹೆಂಗಳೆಯರ ಮನದ ಬಾವಿ ಕೂಡ ಆಗಿ ಹೋಗಿತ್ತು. ದಿನ ನಿತ್ಯದ ತಮ್ಮ ತಮ್ಮ ಮನೆಯ ಕೆಲಸಗಳಲ್ಲಿ ತೊಡಗಿಕೊಂಡ ಹೆಂಗಳೆಯರಿಗೆಲ್ಲ ಅದು ಅಕ್ಕ ಪಕ್ಕದ ಹೆಂಗಸರೊಂದಿಗೆ ಉಭಯ ಕುಶಲೋಪರಿಗಳನ್ನೆಲ್ಲಾ ವಿಚಾರಿಸಿ, ಸ್ವಲ್ಪ ಹೊತ್ತು ನಿಂತು ಕಾಲಕಳೆಯುವ ಜಾಗ ಕೂಡ ಅದು. ಮನೆಯಲ್ಲಿ ನಡೆಯುವ ಸೀಮಂತ, ಹುಟ್ಟು, ಮದುವೆ, ಪೂಜೆ ಮುಂತಾದ ಕಾರ್ಯಗಳೇನೇ ಇದ್ದರೂ ಒಬ್ಬರಿಗೊಬ್ಬರು ಹಂಚಿಕೊಳ್ಳುವ ಜಾಗ ಅದು. ಅತ್ತೆ ವಾರ್ತೆ, ಸೊಸೆ ವಾರ್ತೆ, ಅಕ್ಕ ಪಕ್ಕದವರ ಮನೆ ವಾರ್ತೆ ಎಲ್ಲವುಗಳನ್ನೂ ಒಬ್ಬರಿಗೊಬ್ಬರು ಹಂಚಿಕೊಂಡು ಸ್ವಲ್ಪ ಕಾಲ ಕಳೆಯುವ ಸ್ಥಳ ಅದು. ಮನೆಗೆ ಬಂದ ಹೊಸ ಸೊಸೆಯನ್ನು ಇತರ ಹೆಂಗಸಿರಿಗೆ ಪರಿಚಯಸುವ ವೇಧಿಕೆ ಅದು. ಆವಳು ಹಾಗೆ, ಇವಳು ಹಾಗೆ, ಅವರ ಮನೆಯಲ್ಲಿ ಅದು, ಇವರ ಮನೆಯಲ್ಲಿ ಇದು ಎಂದು ಅಲ್ಲಿ ಇಲ್ಲದವರ ಬಗ್ಗೆ ಆಡಿ ಕೊಳ್ಳುವ ಸ್ಥಳವು ಕೂಡ ಅದೇ.
ಬೇಸಿಗೆಯಲ್ಲಿ ನೀರು ಕೆಳಕ್ಕೆ ಹೋಗಿ ಎಲ್ಲರಿಗೂ ಸಾಲದಾಗದ ಪರಿಸ್ಥಿತಿ ಬಂದಾಗ, ಇದು ನಮ್ಮ ಬಾವಿ,ಇದು ನಮ್ಮ ಬಾವಿ ಎಂದು ಒಬ್ಬರಿಗೊಬ್ಬರು ಕಿತ್ತಾಡಿಕೊಂಡು ಒಬ್ಬರಿಗೊಬ್ಬರು ಮಾತಾಡಿಕೊಳ್ಳದಿದ್ದರೂ ಮತ್ತೆ ಮಳೆ ಬಂದು ಬಾವಿ ತುಂಬಿದಾಗಲೆಲ್ಲಾ ಮತ್ತೆ ಮಾತು ಹರ್ಷ ಎಲ್ಲವೂ ಪುನರಾಂಭಗೊಳ್ಳುತ್ತಿದ್ದು ಅದೇ ಜಾಗದಲ್ಲಿ.
ಆ ಬಾವಿ ಅದೆಷ್ಟೋ ಮನೆಯ ಹೆಂಗಸರನ್ನ ನೋಡಿದೆಯೋ, ಅದೆಷ್ಟು ಜನ ಬಂದು ನೀರು ಎತ್ತಿ ಹೊತ್ತು ಸಾಗಿದ್ದಾರೋ ಗೊತ್ತಿಲ್ಲ. ಹಾಗೆ ಬಂದ ಹೆಂಗಸರಲ್ಲಿ ಬೀರಪ್ಪನ ಹೆಂಡತಿ ಶಾಂತಮ್ಮನವರು ಕೂಡ ಒಬ್ಬರು. ಆ ಮನೆಗೆ ಮದುವೆಯಾಗಿ ಹೊಸತಾಗಿ ಬಂದಾಗ ಶಾಂತಮ್ಮನವರಿಗೆ ೧೯ ವರ್ಷ. ಮದುವೆಯಾಗಿ ಒಂದು ವಾರ ಕಳೆದಿರಬಹುದೇನೋ, ಅತ್ತೆ ಶಿವಮ್ಮ ಸೊಸೆಯನ್ನು ನೀರು ತರುವ ನೆಪವೊಡ್ಡಿ ಬಾವಿಕಟ್ಟೆಯ ಬಳೀ ಕರೆತಂದಿದ್ದರು, ತನ್ನ ಒರಗೆಯವರಿಗೆ ಪರಿಚಯಿಸುವುದಕ್ಕೆ. ಅದು ಮೊದಲೇ ಇತರ ಹೆಂಗಸಿರಿಗೆ ತಿಳಿದಿದ್ದರಿಂದ ಅವರೆಲ್ಲ ಅದಾಗಲೇ ಬಂದು ಸೇರಿದ್ದರು. ಆಗ ಹೊಸಮನೆ , ಹೊಸ ಜನ ಆಗಿದ್ದರಿಂದ ಸ್ವಲ್ಪ ನಾಚಿಕೆಯಿಂದಲೇ ಮಾತನಾಡಿ ಬಂದಿದ್ದರು ಶಾಂತಮ್ಮನವರು. ಕ್ರಮೇಣ ಕಾಲಕಳೆಯುತ್ತಾ ಹೋದಂತೆ ಪರಿಚಯ ಸ್ನೇಹ ಸಂಬಂಧಗಳು ಹೆಚ್ಚುತ್ತಾ ಹೋಗಿ ಇವಳು ಅವರಲ್ಲಿ ಒಬ್ಬಳಾಗಿ ಸೇರಿ ಹೋದರು.
ಈಗ ಶಾಂತಮ್ಮನವರಿಗೆ ಮೊದಲಿನ ವಯಸ್ಸಲ್ಲ, ಹರೆಯ ಆದಾಗಲೇ ಕಳೆದು ಮುಪ್ಪು ಆವರಿಸಿದೆ. ಮೊದಲಿನ ತಾಕತ್ತು, ಸ್ಥೆರ್ಯ ಅವಳಲ್ಲಿ ಈಗಿಲ್ಲ. ಮಕ್ಕಳು ಬೆಳೆದು ದೊಡ್ಡವರಾಗಿ ಪರ ಊರುಗಳಲ್ಲಿ ನೆಲಸಿಯಾಗಿದೆ. ಇದು ಅವಳೊಬ್ಬಳ ಮನೆಯ ಕತೆಯಲ್ಲ, ಅಕ್ಕ ಪಕ್ಕದ ಮನೆಯವರ ಕತೆಯೂ ಕೂಡ ಅದೇ. ಬೆಳೆದು ನಿಂತ ಮಕ್ಕಳೆಲ್ಲ ಊರು ಬಿಟ್ಟು ಪರ ಊರಿಗಳಾಗಿದ್ದಾರೆ. ಮನೆಯ ಮನುಷ್ಯರೂ ಕೂಡ ಖಾಲಿಯಾಗುತ್ತಾ ಬಂದು ಮನೆ, ಮನಸ್ಸು ಎರಡು ಬರಿದಾಗತೊಡಗಿವೆ. ಆದರೆ ಬಾವಿ ಮಾತ್ರ ಇನ್ನೂ ಇದೆ , ಜನ ಇಲ್ಲ ಅಷ್ಟೇ. ಇಂದು ಆ ಬಾವಿಯ ಸುತ್ತಲು ಇರುವ ಮನೆಗಳಲ್ಲಿ ಜನ ಎನ್ನುವ ಮನೆ ಇರುವುದು ಶಾಂತಮ್ಮನವರ ಮನೆ ಮಾತ್ರ. ಅದು ಇನ್ನೆಷ್ಟು ದಿನವೋ!
ಬಾವಿ ಕಾಲಕಳೆದಂತೆ ತನ್ನ ರೂಪ ಬದಲಿಸಿಕೊಂಡಿದೆ. ಮೊದಲು ನೆಲಕ್ಕೆ ಹಾಸಿದ್ದ ಬಾವಿ, ಇತ್ತೀಚೆಗೆ ಕಟ್ಟೆ ಕಟ್ಟಿಸಿಕೊಂಡು, ಸುಣ್ಣ ಬಣ್ಣ ಬಳಿದುಕೊಂಡು ಮದುವಣಗಿತ್ತಿಯಂತೆ ಮೈದಳೆದು ನಿಂತಿದೆ. ದಿಬ್ಬಣವಿಲ್ಲದ ರಜಿಸ್ಟರ್ ಮದುವೆಯಂತೆ.
ಹೇಗಿತ್ತು ಊರು, ಈಗ ಹೇಗಾಯ್ತು ಎಂದು ಯೋಚಿಸುತ್ತಾ ಸುತ್ತ ಖಾಲಿಯಾಗಿರುವ ಮನೆಗಳತ್ತ ದೃಷ್ಟಿ ಹರಿಸಿದರು ಶಾಂತಮ್ಮನವರು. ಆ ಗಿರಿಜಕ್ಕನ ಮನೆ, ಅದು ಖಾಲಿಯಾಗಿ ಅದೆಷ್ಟು ವರ್ಷಗಳಯ್ತು. "ಏನೇ, ಇದು ನಿನ್ನ ಗಂಡ ತೆಗೆದ ಬಾವಿ ಏನೇ? ಬೆಳಿಗ್ಗೆ ಬೆಳಿಗ್ಗೆ ನೀರು ಸೇದಲು ಬಂದಿದ್ದಿಯಾ" ಎಂದು ಆಗಾಗ ಅಣುಕಿಸುತ್ತಿದ್ದ ಗಿರಿಜಕ್ಕ ತನ್ನ ಮನೆ, ಅ ಬಾವಿ ಬಿಟ್ಟು ಹೋಗಿ ಅದಾಗಲೇ ಇಪ್ಪತ್ತು ವರ್ಷಗಳಾಗಿತ್ತು. ಇದ್ದ ಒಬ್ಬನೇ ಮಗ ದೂರದ ಅಮೇರಿಕಾದಲ್ಲಿ ನೆಲಸಿದ್ದಾನಂತೆ. ಆತ ಕೊನೆಯ ಬಾರಿ ಬಂದಿದ್ದು ಆರೇಳು ವರ್ಷಗಳ ಹಿಂದೆ. ಅದೇನೋ ಹೆಂಡತಿಯ ಅಣ್ಣನ ಮಗನ ಮದುವೆಗೆ ಅಂತು ಬಂದವನು, ಹೀಗೆ ಬಂದು ಹಾಗೆ ಹೋಗಿದ್ದ. ಮನೆಯ ಮುಂದಿನ ಮಾಡು ಅದಾಗಲೇ ಅರ್ಧ ಕಳಚಿಬಿದ್ದಿದೆ, ಈಗ ನೋಡುವವರಾರಿಲ್ಲ. ಮನೆಯ ಅಂಗಳದಲ್ಲಿ ಅದಾಗಲೇ ಎಕ್ಕೆ ತುಂಬೆಗಿಡಗಳ ಹಿಂಡು ಬೆಳೆದು ನಿಂತಿದೆ. ಹೇಗಿತ್ತು ಮನೆ ಹೇಗಾಯ್ತು.
ತಮ್ಮ ಮನೆಯ ಮುಂದಿನ ಪಾರತಮ್ಮನ ಮನೆಯ ಕತೆ ಇನ್ನೊಂದು ತರ. ಪಾರತಮ್ಮನಿಗೆ ಇಬ್ಬರುಗಂಡುಮಕ್ಕಳು ಒಬ್ಬ ಪೂನಾದಲ್ಲಿ ಇದ್ದರೆ ಇನ್ನೊಬ್ಬ ಬೆಂಗಳೂರಲ್ಲಿ. ಇಬ್ಬರು ಅಲ್ಲಿಯೇ ಮನೆ ಕಟ್ಟೀ ಅಲ್ಲಿಯೇ ನೆಲೆಸಿದ್ದಾರೆ. ಪಾರತಮ್ಮ ಹೋಗಿ ಹತ್ತೋ ಹನ್ನೆರಡೋ ವರ್ಷಗಳಾಯ್ತು. ಗಂಡು ಮಕ್ಕಳು ಪಾರತಮ್ಮ ಹೋದ ಮೇಲೆ ಆಸ್ಥಿಗಾಗಿ ಕಿತ್ತಾಡಿ ಈಗ ಮೂರ್ನಾಲ್ಕು ವರ್ಷಗಳಿಂದ ಊರಿಗೆ ಬರುವುದನ್ನೇ ನಿಲ್ಲಿಸಿಬಿಟ್ಟಿದ್ದಾರೆ. ಪಾರತಮ್ಮನ ಕೊಟ್ಟಿಗೆ ಕೋಳಿ ಗೂಡು ಎಲ್ಲ ಬಿದ್ದು ಅದಾಗಲೇ ನೆಲಕಚ್ಚಿದೆ. ಮನೆಯ ಮುಂದಿನ ತೆಂಗಿನ ಮರದ ತುದಿ ಒಣಗಿ, ಇಂದೋ ನಾಳೆಯೋ ಬಿಳುವ ಸ್ಥಿತಿಯಲ್ಲಿದೆ.
ಪಾರತಮ್ಮನ ಮನೆಯ ಪಕ್ಕದ ಗಂಗಮ್ಮನ ಮನೆ ಸ್ಥಿತಿಯೂ ಅದೇ, ಗಂಗಮ್ಮನಿಗೆ ಮೂರು ಜನ ಹೆಣ್ಣು ಮಕ್ಕಳು ಮತ್ತು ಒಬ್ಬ ಮಗ. ಇದ್ದೊಬ್ಬ ಮಗನು ಮದುವೆಗೆ ಮೊದಲೇ ತೀರಿ ಹೋಗಿದ್ದ. ಗಂಗಮ್ಮ ಮಗನ ಸಾವಿನ ಕೊರಗಿನಲ್ಲೇ ತೀರಿ ಹೋಗಿದ್ದಳು. ಅವಳ ಹೆಣ್ಣು ಮಕ್ಕಳು ಮದುವೆಯಾಗಿ ಗಂಡ ಮಕ್ಕಳ ಜೊತೆ ಬೇರೇ ಬೇರೇ ಊರುಗಳಲ್ಲಿದ್ದಾರೆ. ಗಂಗಮ್ಮ ಸತ್ತಾಗ ಬಂದವರು ಮತ್ತೆ ಇತ್ತಕಡೆ ತಿರುಗಿಯೂ ನೋಡಿಲ್ಲ.
ಹೀಗೆ ಒಂದೊಂದು ಮನೆಯಲ್ಲಿ ಒಂದೊಂದು ಸ್ಥಿತಿ. ಮನೆ ಇದೆ, ಜನ ಇಲ್ಲ. ಮುಂದೆ ತನ್ನ ಮನೆಯ ಸ್ಥಿತಿ ಇನ್ನೇನೋ ಎಂದು ಅಂದುಕೊಳ್ಳುತ್ತಾ ಬಿಂದಿಗೆ ನೀರಿಗೆ ಬಿಟ್ಟಳು. ಜನರಿಲ್ಲದ ಕಾರಣ ಬಾವಿಯ ನೀರು ಉಪಯೋಗಿಸದೇ ಅರ್ಧಕ್ಕರ್ಧ ಹಾಗೆ ಉಳಿದಿತ್ತು. ನೀರು ತುಂಬಿಸಿ ಬಿಂದಿಗೆಯನ್ನೆತ್ತಿ ಬರುವಾಗ ಬಾವಿಯ ಕಟ್ಟೆಯನ್ನೊಮ್ಮೆ ನೋಡಿದಳು. ಮಗ ಕಟ್ಟಿಸಿದ ಬಾವಿಯ ಕಟ್ಟೆ, ಪಂಪಿನ ಮನೆ ಹಾಗೂ ಈ ಮನೆ , ಈ ತೋಟ ಇವೆಲ್ಲವೂ ನಾನಿರುವವರೆಗೆ ಮಾತ್ರ. ಮುಂದೆ ಇತರರ ಮನೆಯ ಹಾಗೆ ತನ್ನ ಮನೆಯೂ ಕೂಡ. ಕೊನೆಗೂ ಉಳಿಯುವುದು ಈ ಒಂಟಿ ಭಾವಿ ಮಾತ್ರ. ಹೆಂಗಳೆಯರ ಮಾತಿನ ಶಬ್ಧಗಳಿಲ್ಲದೇ, ಬಳೆಗಳ, ಕೊಡಗಳ ಸದ್ದಿಲ್ಲದೇ ಇರುವ ಮನೆಯ ಮುಂದಿನ ಸ್ತಬ್ಧ ಬಾವಿ ಮಾತ್ರ. ಕಣ್ಣಂಚಿನಲ್ಲಿ ಹಾಗೆ ಗೊತ್ತಿಲ್ಲದೇ ಜಾರಿದ ಹನಿಗಳನ್ನೊರಿಸಿಕೊಳ್ಳುತ್ತಾ ಒಳನಡೆದರು ಶಾಂತಮ್ಮನವರು.
-- ಮಂಜು ಹಿಚ್ಕಡ್
ಕೊನೆಯ ಮಾತು!
ನಾನು ಕತೆಯ ಬಗ್ಗೆ ಹೇಳಿದಾಗ, ಕತೆಗೆ ತಕ್ಕಂತೆ ಅತ್ಯುತ್ತಮವಾದ ಪೆನ್ಸಿಲ್ ರೇಖಾಚಿತ್ರವನ್ನು ಬಿಡಿಸಿಕೊಟ್ಟ ಕುಮಾರಿ ದಿವ್ಯಶ್ರೀ ಗೆ ನನ್ನ ಹೃತ್ಪೂರ್ವಕ ಧನ್ಯವಾಗಳನ್ನು ಅರ್ಪಿಸುತ್ತಾ, ತನ್ನ ಕೆಲಸದ ಜೊತೆ ಜೊತೆಗೆ ಚಿತ್ರಕಲೆಯನ್ನು ಹವ್ಯಾಸವಾಗಿಟ್ಟುಕೊಂಡ ಅವಳ ಚಿತ್ರಕಲೆಯ ಹವ್ಯಾಸ ಕೇವಲ ಎಲೆಯಮರೆಯ ಕಾಯಿಯಾಗಿ ಹಾಗೇ ಇರದೇ ಇನ್ನಷ್ಟು ಮತ್ತಷ್ಟು ಚಿತ್ರಗಳು ಅವಳೆ ಕೈಗಳಿಂದ ಅರಳಿಬರಲೀ ಎಂದು ಆಶಿಸುತ್ತೇನೆ.
